ವ್ಯಕ್ತಿನಾಮಗಳು -
	ವ್ಯಕ್ತಿಗೆ ಇರುವ ಹೆಸರು (ಪರ್ಸನ್ ನೇಮ್); ವ್ಯಕ್ತಿಗಾಗಲಿ ವಸ್ತುವಿಗಾಲಿ ಒಂದು ಸಮೂಹದಿಂದ ಪ್ರತ್ಯೇಕವಾದ ಅಸ್ತಿತ್ವವನ್ನು ಇದು ಗುರುತಿಸಿಕೊಡುತ್ತದೆ. ಸಾಮಾನ್ಯ ನಾಮಪದಗಳನ್ನು ಅಂಕಿತನಾಮಗಳಿಂದ ಪ್ರತ್ಯೇಕಿಸುವುದಕ್ಕಾಗಿ, ಇಟ್ಟ ಹೆಸರುಗಳನ್ನು ದೊಡ್ಡಕ್ಷರದಿಂದ ಪ್ರಾರಂಭಿಸಿ ಬರೆಯುವ ಪದ್ಧತಿ ಇಂಗ್ಲಿಷ್ ಭಾಷೆಯಲ್ಲಿದೆ. ಆದರೆ ಇವೆರಡರ ನಡುವೆ ಭೇದವನ್ನು ಕಾಣಲಾಗದೆ ಗೊಂದಲಗಳು ಕಾಣಿಸಿಕೊಂಡಿರುವುದೂ ಉಂಟು. ಜರ್ಮನ್ ಭಾಷೆಯಲ್ಲಿ ಎಲ್ಲ ಹೆಸರುಗಳನ್ನೂ ದೊಡ್ಡಕ್ಷರದಿಂದಲೇ ಪ್ರಾರಂಭಿಸಿ ಈ ಗೊಂದಲ ವನ್ನು ತಪ್ಪಿಸಿರುವುದನ್ನೂ ಕಾಣಬಹುದು. 

	ವ್ಯಕ್ತಿಗೆ ವಿಶಿಷ್ಟ ಅಸ್ತಿತ್ವವಿರುವುದರಿಂದ ವ್ಯಕ್ತಿನಾಮ ಮೊದಲು ಬಳಕೆಗೆ ಬಂತೆಂದು ನಾಮವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಮಾನವ ಇತಿಹಾಸದಲ್ಲಿ ವ್ಯಕ್ತಿನಾಮವಿಲ್ಲದ ಯಾವುದೇ ಸಮುದಾಯ ವಿಲ್ಲ. ಮೊದಮೊದಲು ಹೆಸರುಗಳು ವಿವರಣಾತ್ಮಕವಾಗಿಯೇ ಇದ್ದುವು, ಆ ಕುಂಟುವ ಮನುಷ್ಯ, ಈ ಉಗ್ಗುವ ಮನುಷ್ಯ ಮೊದಲಾದುವು. ಮಿತಾಸಕ್ತಿಯಿಂದಾಗಿ ಇವು ಕುಂಟ, ಉಗ್ಗ ಎಂದಾಗಿವೆ. ಹೀಗೆಯೇ ಉಗಮಿಸಿದ ಕೆಂಪ, ಕರಿಯ ಎಂಬ ಸಿದ್ಧ ಹೆಸರುಗಳು ಸಹಜ ಚಲಾವಣೆ ಪಡೆದುಬಿಡುತ್ತವೆ. ಒಂದೇ ಹೆಸರಿನ ಅನೇಕ ವ್ಯಕ್ತಿಗಳಿದ್ದಾಗ ಹೆಸರಿಗೂ ಅನೇಕ ವ್ಯಕ್ತಿತ್ವ ಹೇಗೆ ಇರಬಲ್ಲುದೋ ಹಾಗೆಯೇ ಒಬ್ಬನಿಗೇ ಇರುವ ಬೇರೆ ಬೇರೆ ಹೆಸರುಗಳೂ ಅವನ ವ್ಯಕ್ತಿತ್ವದ ಭಿನ್ನ ಮುಖಗಳ ಪರಿಚಯ ಮಾಡಿಕೊಡುತ್ತವೆ. ಗಾಂಧಿ, ಬಾಪೂಜಿ, ಮಹಾತ್ಮ-ಇವು ಅಂಥ ಲಕ್ಷಣವಿಶಿಷ್ಟ ಹೆಸರುಗಳು. 

	ಪ್ರತಿ ಮನುಷ್ಯನೂ ಹುಟ್ಟಿದ ಕೂಡಲೇ ಕೆಲವು ನಿಮಿಷಗಳಲ್ಲೋ ದಿನಗಳಲ್ಲೋ ವಾರಗಳಲ್ಲೋ ತಾತ್ಕಾಲಿಕವಾಗಿಯೋ ಶಾಶ್ವತವಾಗಿಯೋ ಒಂದು ಹೆಸರನ್ನು ಪಡೆದಿರುತ್ತಾನೆ. ತಂದೆ, ತಾಯಿ, ಕುಟುಂಬ ಇಲ್ಲವೆ ಸಮುದಾಯದ ಸದಸ್ಯರು ಸೇರಿ ವ್ಯಕ್ತಿಗೆ ಹೆಸರಿಡುತ್ತಾರೆ. ಭಾರತೀಯರ ಪಾಲಿಗಂತೂ ಇದೊಂದು ಅಗತ್ಯ ಸಂಸ್ಕಾರ. ಸ್ಮøತಿಕಾರರು ಹೆಸರುಗಳು ಹೇಗಿರಬೇಕೆಂಬುದಕ್ಕೂ ನಿರ್ದೇಶಕ ಸೂತ್ರಗಳನ್ನು ನೀಡಿದ್ದಾರೆ. ವಿಧಿವತ್ತಾದ ಸಮಾರಂಭಗಳಲ್ಲಿ ನಾಮಕರಣ ನಡೆಯುತ್ತದೆಂಬುದರಿಂ ದಲೂ ಸಾರ್ವಜನಿಕರೊಂದಿಗೆ ಈ ಹೆಸರಿನ ಮೂಲಕ ವ್ಯವಹಾರ ನಡೆಯುವುದೆಂಬ ಕಾರಣದಿಂದಲೂ ವ್ಯಕ್ತಿಹೆಸರು ಪರೋಕ್ಷವಾಗಿ ಸಾರ್ವಜನಿಕ ಸ್ವರೂಪದ್ದೆಂದು ತಿಳಿಯಬಹುದು. ಹೆಸರಿಡುವವರು ಹಿತೈಷಿಗಳೇ ಆದುದರಿಂದ ಚೆನ್ನಾದ, ಶುಭವಾದ, ಒಳ್ಳೆಯ ಹೆಸರುಗಳನ್ನೇ ಇಡುತ್ತಾರೆ. ವ್ಯಕ್ತಿತ್ವ ರೂಪುಗೊಳ್ಳುವ ಮೊದಲೇ ಬಂದಿರುವ ಈ ಹೆಸರು ಮತ್ತು ವ್ಯಕ್ತಿಯ ನಡುವೆ ಮೇಳತಪ್ಪಬಹುದು. “ಸಂಪತ್” ದರಿದ್ರನೂ “ಸುಂದರಮ್ಮ” ಕುರೂಪಿಯೂ ಆಗಿರಬಹುದು. ಏನೇ ಆದರೂ ಮಕ್ಕಳ ಹೆಸರುಗಳು ಹೆತ್ತವರ ಮನೋದೃಷ್ಟಿಯನ್ನು ಪ್ರತಿಬಿಂಬಿಸುವುದಂತೂ ಸ್ಪಷ್ಟ. 

	ಒಮ್ಮೆ ಹೀಗೆ ಪ್ರಾರಂಭವಾದ ಹೆಸರುಗಳು ವಂಶಪಾರಂಪರಿಕವಾಗಿ ಬಳಕೆಗೆ ಬಂದು ಮುಂದುವರಿದಿವೆ. ಭಾರತದಲ್ಲಿ ಜಾತಿಗಳನ್ನು ವ್ಯಕ್ತಿಯ ಹೆಸರಿನಿಂದಲೇ ಸ್ಥೂಲವಾಗಿ ಗುರುತಿಸಬಹುದಾಗಿತ್ತು. ಹೆಸರಿನ ವಿಷಯದಲ್ಲಿ ಮಧ್ಯಮವರ್ಗದವರು ಶ್ರೀಮಂತರನ್ನೂ ಕೆಳವರ್ಗದವರು ಇವರಿಬ್ಬರನ್ನೂ ಅನುಕರಿಸಿರುವುದು ಪ್ರಪಂಚದ ಎಲ್ಲೆಡೆ ಸಾಮಾನ್ಯ ಚಿತ್ರ. ಪ್ರತಿಯೊಬ್ಬನೂ ತನ್ನ ಹೆಸರಿನ ಬಗೆಗೆ ಪ್ರಜ್ಞಾಪೂರ್ವಕನಾಗಿರುತ್ತಾನೆ ಮತ್ತು ಅಭಿಮಾನ ಹೊಂದಿರುತ್ತಾನೆ. ಪ್ರತಿ ಹೆಸರಿನ ಸುತ್ತ ಸಣ್ಣದೊಂದು ಪ್ರಪಂಚವೇ ನಿರ್ಮಾಣವಾಗಿ ಅದು ಧ್ವನಿಸೂಚಕವೂ ಅರ್ಥಪೂರ್ಣವೂ ಆಗಿಬಿಡುತ್ತದೆ. ಒಂದೇ ಹೆಸರು ಬೇರೆ ಬೇರೆಯವರಲ್ಲಿ ಬೇರೆ ಬೇರೆ ಭಾವನೆಗಳನ್ನು ಮೂಡಿಸಬಹುದು. ಹಾಗೆಯೇ ವ್ಯಕ್ತಿನಾಮಗಳ ಅಗಣಿತ ಸಂಖ್ಯೆ ಮತ್ತು ಪ್ರಾಮುಖ್ಯ ಕುತೂಹಲಕಾರಿಯಾದುವು.  

	ಸಾಮಾನ್ಯ ಪದಗಳಿಂದ, ಸ್ವೀಕರಣದಿಂದ ಹಾಗೆಯೇ ಪದಭಾಗ, ಉಚ್ಚಾರಾಂಶಗಳಿಂದ, ಇಲ್ಲವೇ ಕೇವಲ ಧ್ವನಿ ಸಂಯೋಜನೆಗಳಿಂದ ಹೆಸರುಗಳನ್ನು ರೂಪಿಸಿಕೊಳ್ಳಲಾಗುತ್ತದೆ. ವ್ಯಕ್ತಿನಾಮಗಳ ರಚನೆ, ನಿಷ್ಪತ್ತಿ, ಬೆಳೆವಣಿಗೆ ಮುಂತಾದವುಗಳ ಅಧ್ಯಯನ ಪಾಶ್ಚಾತ್ಯ ದೇಶಗಳಲ್ಲಿ ನಡೆದಿದೆ. ಒಂದು ಸಾಮಾಜಿಕ ಸಂಗತಿಯಾಗಿ ವ್ಯಕ್ತಿನಾಮಗಳನ್ನು ಸಂಖ್ಯಾಪರಿವೀಕ್ಷಣೆಯಿಂದಾಗಲಿ, ಚಾರಿತ್ರಿಕ ದೃಷ್ಟಿಯಿಂದಾಗಲಿ ನಡೆದಿರುವ ಅಧ್ಯಯನ ತುಂಬ ಕಡಿಮೆ. ಭಾರತದಲ್ಲಿ ನಾಮವಿಜ್ಞಾನ ಇನ್ನೂ ಬೆಳೆಯಬೇಕಾಗಿರುವ ಶಾಖೆಯಾಗಿಯೇ ಉಳಿದಿದೆ. 

	ವ್ಯಕ್ತಿನಾಮವಿಜ್ಞಾನದೊಡನೆ ಇತರ ಶಾಸ್ತ್ರಗಳು ಸಂಬಂಧ ಹೊಂದಿವೆ. ವಂಶವೃಕ್ಷದ ಅಧ್ಯಯನ ಮಾಡುವವರಿಗೂ ಇತಿಹಾಸತಜ್ಞರಿಗೂ ಭಾಷಾ ವಿಜ್ಞಾನಿಗಳಿಗೂ ಅದು ನೆರವಿಗೆ ಬರುತ್ತದೆ. ವ್ಯಕ್ತಿನಾಮವನ್ನೂ ಕುಲನಾಮ ವನ್ನೂ ಶಾಸನದ ಸಹಾಯದಿಂದ ಹೇಗೆ ವಿಶ್ಲೇಷಿಸಬಹುದೆಂಬುದನ್ನು ನೋಡಬಹುದು: ಹೆಬ್ಬಾರ್ ಎನ್ನುವುದು ಪಶ್ಚಿಮ ಕರ್ನಾಟಕದ ಬ್ರಾಹ್ಮಣ ಉಪಜಾತಿಯೊಂದರ ಕುಲನಾಮ. ಪೆರ್‍ಬ್ಬಾರ್ವು ಅಧಿಕಾರ ವನ್ನು ನಿರ್ವಹಿಸುತ್ತಿದ್ದ ಅನೇಕ ವ್ಯಕ್ತಿಗಳನ್ನು ಉಲ್ಲೇಖಿಸುವ ಶಾಸನಗಳು ಶಿರಸಿ ತಾಲ್ಲೂಕಿನಲ್ಲಿ ದೊರೆತಿವೆ. ಪೆರ್-ಮಹಾ, ಪಾರ್ವು-ಪಾರ್ವ-ಬಾಹ್ಮಣ-ಮಹಾಜನ ಆಡಳಿತ ಸಂಸ್ಥೆಗಳು ಬ್ರಾಹ್ಮಣರದಾಗಿರುತ್ತಿದ್ದು ವೆಂಬುದರ ಹಿನ್ನೆಲೆಯಲ್ಲಿ ಈಗಿನ ಹೆಬ್ಬಾರ್‍ಗಳು ಆಗಿನ ಮಹಾಜನ ಆಡಳಿತ ಸಂಸ್ಥೆಗಳ ಸದಸ್ಯರ ಕುಲಜರು ಎಂದು ತೀರ್ಮಾನಿಸಬಹುದು. ವ್ಯಕ್ತಿನಾಮಗಳು ಭಾಷೆ ಮತ್ತು ಸಂಸ್ಕøತಿಗೆ ಸಂಬಂಧ ಪಟ್ಟವು. ಕನ್ನಡ ವ್ಯಕ್ತಿನಾಮಗಳಲ್ಲಿಯೂ ವಾರ್ಗಿಕ (ಜೆನೆರಿಕ್) ಮತ್ತು ನಿರ್ದಿಷ್ಟಗಳನ್ನು (ಸ್ಪೆಸಿಫಿಕ್) ಕಾಣಬಹುದು. ರಾಮ+ಅಪ್ಪ, ಕಮಲ+ಅಮ್ಮ - ಇವುಗಳಲ್ಲಿ ರಾಮ, ಕಮಲ, ಎಂಬ ನಿರ್ದಿಷ್ಟಗಳು ಒಬ್ಬ ವ್ಯಕ್ತಿಯನ್ನು ಉಳಿದ ವ್ಯಕ್ತಿಗಳಿಂದ ಬೇರ್ಪಡಿಸುವಂಥವು. ವಾರ್ಗಿಕಗಳೇ ಕೆಲವೊಮ್ಮೆ ನಿರ್ದಿಷ್ಟಗಳಾಗಿ ಬಳಕೆಯಾಗಿರುವುದೂ ಉಂಟು. ಉದಾಹರಣೆಗೆ ಅಪ್ಪಣ್ಣ, ಗೌಡಯ್ಯ. ವಾರ್ಗಿಕಗಳಲ್ಲಿ ಸಂಬಂಧವಾಚಿಗಳು, ಜಾತಿವಾಚಿಗಳು ಮತ್ತು ವೃತ್ತಿವಾಚಿಗಳಿವೆ. ಅಜ್ಜ (ರಾಮಜ್ಜ), ಅಬ್ಬೆ (ಅತ್ತಿಮಬ್ಬೆ), ಹೀಗೆಯೇ - ಅಯ್ಯ, ಅಪ್ಪ, ಅವ್ವ, ಅಮ್ಮ, ಅಣ್ಣ, ಅಕ್ಕ ಇಂಥ ವಾರ್ಗಿಕಗಳು ಎಲ್ಲ ಕಾಲಕ್ಕೂ ಇವೆ. ಮಗ, ಮಗಳು, ಮೊಮ್ಮಗ, ಮೊಮ್ಮಗಳು ಈ ಪದಗಳು ವಾರ್ಗಿಕಗಳಾಗಿ ಬಳಕೆಯಾಗಿಲ್ಲ. ತಂಗಿ ಎಂಬ ಆಕೃತಿಮಾ ಯಾವ ದ್ರಾವಿಡ ಭಾಷೆಯಲ್ಲಿಯೂ ವಾರ್ಗಿಕವಾಗಿ ಬಳಕೆಯಾದಂತಿಲ್ಲ. ಜಾತಿಸೂಚಕ ಪದಗಳಾದ ಶೆಟ್ಟಿ, ಅಯ್ಯರ್, ಗೌಡ, ಭಟ್ಟ, ಶಾಸ್ತ್ರೀ ಮೊದಲಾದವೂ ವಾರ್ಗಿಕಗಳಾಗಿ ಬಳಕೆಯಾಗುತ್ತವೆ. ಭಟ್ಟ, ಅಯ್ಯರ್, ಅಯ್ಯಂಗಾರ್‍ಗಳು ಬ್ರಾಹ್ಮಣರಿಗೆ ಸೀಮಿತವಾದರೂ ಉಳಿದವು ಅನೇಕ ಜಾತಿಗಳಲ್ಲಿ ಬಳಕೆಯಾಗುತ್ತವೆ. ಉದಾಹರಣೆಗೆ, ಶೆಟ್ಟಿ ಎಂಬುದು ವೈಶ್ಯ, ಲಿಂಗಾಯತ, ದೇವಾಂಗ ಹಾಗೂ ಬಂಟರಲ್ಲೂ ಇದೆ. ಸಂಬಂಧ ವಾಚಿ ವಾರ್ಗಿಕಗಳೇ ಸೇರಿ ಒಂದು ಪೂರ್ಣ ಹೆಸರಾಗುವಂತೆ, ಜಾತಿವಾಚಿ ವಾರ್ಗಿಕಗಳು ಸೇರಲಾರವು. ಆದರೂ ಅಪ್ಪಶೆಟ್ಟಿ, ಅಯ್ಯರಸ-ಇಂಥ ಶಾಸನೋಕ್ತ ಹೆಸರುಗಳನ್ನು ಗಮನಿಸಬಹುದು. ಸಂಬಂಧವಾಚಿಯೂ ಜಾತಿವಾಚಿಯೂ ವಾರ್ಗಿಕಗಳಾಗಿ ಒಟ್ಟಿಗೆ ಬಂದಾಗ ಸಾಮಾನ್ಯವಾಗಿ ಮೊದಲು ಸಂಬಂಧವಾಚಿ ಬರುತ್ತದೆ. ಉದಾಹರಣೆಗೆ ತಿಮ್ಮ+ಅಣ್ಣ + ನಾಯಕ-ತಿಮ್ಮಣ್ಣ ನಾಯಕ. ಕನ್ನಡ ಹೆಸರುಗಳಲ್ಲಿ ವಾರ್ಗಿಕಗಳು ಅನಿವಾರ್ಯವಲ್ಲ. ತಿಮ್ಮ, ಕಾಳ-ಇಂಥ ನಿರ್ದಿಷ್ಟಗಳೇ ಹೆಸರಾಗಿ ಬಳಕೆಯಲ್ಲಿವೆ. ಹೆಂಗಸರ ಹೆಸರುಗಳಲ್ಲಿ ಜಾತಿವಾಚಿಗಳು ಕಾಣಸಿಗ ದಿದ್ದರೂ ಶಾಸನಗಳಲ್ಲಿ ಸೋವಿಗಾವುಂಡಿ, ಸೋವೆನಾಯಕಿತಿ ಎಂಬ ಹೆಸರುಗಳು ಕಾಣಿಸಿಕೊಂಡಿವೆ. ಪ್ರಾಚೀನ ಕರ್ನಾಟಕದಲ್ಲಿ ಹೆಂಗಸರ ಹೆಸರುಗಳು 2ರಿಂದ 6 ಆಕೃತಿಮಾಗಳನ್ನು ಹೊಂದಿರುತ್ತಿದ್ದುವು. ಉದಾ ಹರಣೆಗೆ ರೇವಕ್ಕಬ್ಬೆಗಾವುಂಡಿ (ರೇವ+ಅಕ್ಕ+ಅಬ್ಬೆ+ಗಾವುಂಡಿ). ಸಾಮಾನ್ಯ ಸ್ತ್ರೀಯರಿಗೆ ಅಕ್ಕ, ಅಬ್ಬೆ, ಅಮ್ಮ, ಅವ್ವ, ಬಾಯಿ ಮೊದಲಾದುವೂ ಅಸಾಮಾನ್ಯರಿಗೆ ಅಂಬೆ, ಅಂಬಿಕೆ, ದೇವಿಗಳೂ ಇನ್ನೂ ಉನ್ನತರಿಗೆ ಗೌಡ್ತಿ, ಅರಸಿ, ನಾಯಕಿ ವಾರ್ಗಿಕಗಳಾಗಿ ಸೇರುತ್ತಿದ್ದುವು. 

	ಹೆಸರುಗಳನ್ನು ಹಲವು ವಿಧಗಳಲ್ಲಿ ವರ್ಗೀಕರಿಸಬಹುದು: 

	1. ದೈವಮೂಲ ಹೆಸರುಗಳು (ಥಿಯೋಫೋರಿಕ್): ದೇವರು (ಶಿವ, ಕೃಷ್ಣ, ಸೀತೆ, ಮೈಲಾರ), ಧಾರ್ಮಿಕನಾಯಕರು (ಶಂಕರ, ರಾಮಾನುಜ, ಮಧ್ವ), ಪವಿತ್ರಕ್ಷೇತ್ರಗಳು (ಗಂಗಾ, ಬದರಿ, ಕಾಳಿ) ಹೆಸರಿಗೆ ಕಾರಣವಾಗುತ್ತವೆ. ಉದಾಹರಣೆಗೆ ಶಿವಪ್ಪ; ಬದರಿನಾರಾಯಣ.

	2. ಪೂರ್ವಜಮೂಲ ಹೆಸರುಗಳು (ಆನ್ಸೆಸ್ಟ್ರಲ್): ಸಾಮಾನ್ಯವಾಗಿ ಅಜ್ಜ, ಅಜ್ಜಿ, ತಂದೆ, ತಾಯಿಗಳ ಹೆಸರನ್ನು ಮಕ್ಕಳಿಗೆ ಇಡುವ ಪದ್ಧತಿಯುಂಟು. 

	3. ಅನಿಷ್ಟ ಹೆಸರುಗಳು (ಆಪ್ಟ್‍ರೋ ಪೋಯಿಕ್): ಹುಟ್ಟಿದ ಮಕ್ಕಳು ಸತ್ತು ಮತ್ತೊಂದು ಮಗು ಹುಟ್ಟಿದಾಗಲೋ ಮಗು ರೋಗಪೀ ಡಿತವಾದಾಗಲೋ ದುಷ್ಟಶಕ್ತಿಯ ದೃಷ್ಟಿ ಸಂಹಾರಕ್ಕಾಗಿ ಭಾರತದ ಎಲ್ಲಕಡೆಯೂ ಅಮಂಗಳಕರ ಹೆಸರಿಡುವ ರೂಢಿ ಇದೆ (ಮಸಣಯ್ಯ).

	4. ಜನಪ್ರಿಯ ಹೆಸರುಗಳು (ಪಾಪ್ಯುಲರ್) ಪರಿಸರದಲ್ಲೋ ತಮ್ಮ ಜಾತಿಯಲ್ಲೋ ಬಳಕೆಯಲ್ಲಿದ್ದು ಹಿತವಾಗಿ ಕಂಡ ಹೆಸರುಗಳು ಇರಬಹುದು (ರನ್ನ, ಮಣಿಯಮ ಸೆಟ್ಟಿ).

	5. ಮುದ್ದು ಹೆಸರುಗಳು (ಹೈಪೊಕೋರಿಸಿಕ್): ಹೆಸರನ್ನು ಮೊಟಕುಗೊಳಿಸಿಯೋ ಅಥವಾ ಅಂತ್ಯಕ್ಕೆ ಕೆಲವೊಮ್ಮೆ ಉಕಾರವನ್ನು ಸೇರಿಸಿಯೋ ಇಂಥ ಹೆಸರನ್ನು ಕಲ್ಪಿಸಲಾಗುತ್ತದೆ. (ವಿಜಯ > ವಿಜಿ, ರಾಮಣ್ಣ > ರಾಮು) ದಕ್ಷಿಣಏಷ್ಯ ಭಾಷೆಗಳಲ್ಲೆಲ್ಲ ಉಕಾರವು ಮುದ್ದುಹೆಸರುಗಳಲ್ಲಿ ಕಾಣಿಸುವುದು ಸಹಜವೆಂಬುದು ಎಂ. ಬಿ. ಎಮಿನೊ ಅಭಿಪ್ರಾಯ. ಹೀಗೆ ರೂಪುಗೊಂಡು ಸಿದ್ಧವಾದ ಮುದ್ದು ಹೆಸರುಗಳಿಗೆ ವಾರ್ಗಿಕಗಳನ್ನು ಸೇರಿಸಿ ಸಹಜ ಹೆಸರುಗಳನ್ನು ಮಾಡಿಕೊಂಡಿರುವುದೂ ಉಂಟು: ಉದಾ: ರುಕ್ಕಮ್ಮ, ಕಿಟ್ಟಪ್ಪ. 

	ಎಲ್ಲ ಸಂದರ್ಭಗಳಲ್ಲಿಯೂ ಹೆಸರುಗಳು ಮುದ್ದಿಗಾಗಿಯೇ ಮೊಟಕಾ ಗುವುದಿಲ್ಲ. ಉಚ್ಚಾರ ಸೌಲಭ್ಯಕ್ಕಾಗಿ ಮೊಟಕಾಗುತ್ತವೆ. ರಕಾರ ಹವ್ಯಕರ ಆಡು ಭಾಷೆಗೆ ಸಹಜವಲ್ಲ. (ಈಶ್ವರ > ಈಚ). ರಕಾರವು ಸಕಾರವೋ ಚಕಾರವೋ ಆಗುತ್ತದೆ (ಶಾಂತ > ಸಾಂತು ಶಂಕರಿ > ಚಂಕ್ರಿ) 

	6. ಜನ್ಮನಕ್ಷತ್ರ ಜನನದ ಸಮಯ, ಪರಿಸರ ಅಥವಾ ಗರ್ಭಿಣಿಯಾದ ಸಂದರ್ಭದಿಂದ ಘಟನಾತ್ಮಕ ಹೆಸರುಗಳನ್ನು ಇಡುವ ರೂಢಿಯೂ ಇದೆ. ಉದಾಹರಣೆಗೆ: ವಿಜಯದಶಮಿಯ ದಿನ ಹುಟ್ಟಿದ ಮಗು ವಿಜಯ, ಕಾರ್ತಿಕದಲ್ಲಿ ಹುಟ್ಟಿದ್ದು ಕಾರ್ತಿಕ, ಇತ್ಯಾದಿ. 

	7. ಅಡ್ಡಹೆಸರು (ನಿಕ್‍ನೇಮ್): ಇದು ವ್ಯಕ್ತಿಗೆ ಸೀಮಿತವಾದದ್ದು. ಇದನ್ನು ತಮಾಷೆಗೋ ಕುಚೋದ್ಯಕ್ಕೋ ಇಡುವುದೇ ಹೆಚ್ಚು. ಆದ್ದರಿಂದಲೇ ಇದು ಅಡ್ಡಹೆಸರು. ಆ ಲಕ್ಷಣವು ಅಳಿದು ಹೋದಾಗಲೂ ಉಳಿದುಕೊಳ್ಳುತ್ತದೆ; ಜೀವಮಾನಪರ್ಯಂತ ಇರುತ್ತದೆ. ಮತ್ತೊಂದು ಅಡ್ಡಹೆಸರು ಬಂದಾಗ ಹಳೆಯದು ಮರೆಯಬಹುದು ಇಲ್ಲವೇ ಎರಡೂ ಇರಬಹುದು. ಶರೀರ ಲಕ್ಷಣದಿಂದಾಗಿ-ಕಿವುಡ ರಂಗಪ್ಪ, ನಡತೆಯಿಂ ದಾಗಿ-ಗಬಳೆ ಮಾದ, ಶೀಲದಿಂದಾಗಿ ಗುಳ್ಳೆನರಿ ತಿಮ್ಮಣ್ಣ, ಹವ್ಯಾಸ ದಿಂದಾಗಿ ಭಂಗಿ ರಂಗಣ್ಣ, ಉದ್ಯೋಗದಿಂದಾಗಿ ಟೈಲರ್ ರಂಗೇಗೌಡ, ಬೇರೊಂದು ಊರಿನಿಂದ ಒಕ್ಕಲು ಬಂದಿದ್ದರ ಪರಿಣಾಮ ಸೋಮನಹಳ್ಳಿ ಕಿಟ್ಟಿ, ಮನೆಯ ರೀತಿಯಿಂದಾಗಿ ಹಳೆಮನೆ ಕೃಷ್ಣಪ್ಪ, ಹೊಸಮನೆ ನಾರಣಪ್ಪ, ದೊಡ್ಡಮನಿ ಶಿವಪ್ಪ ಇತ್ಯಾದಿ. ಎಲ್ಲವೂ ಕುಚೋದ್ಯದವಲ್ಲ, ಸೌಲಭ್ಯದ ದೃಷ್ಟಿಯವೂ ಇವೆ ಎಂಬುದನ್ನು ಗಮನಿಸಬೇಕು. ಉತ್ತರ ಕರ್ನಾಟಕದಲ್ಲಿ ಅಡ್ಡ ಹೆಸರನ್ನು ಸರ್ನೇಮ್ ಎಂದು ಪರಿಗಣಿಸುತ್ತಾರೆ. 

	8. ಕುಲನಾಮ (ಸರ್ನೇಮ್): ಇದು ಇಡೀ ಕುಲಕ್ಕೆ ಅನ್ವಯವಾಗು ವಂಥದು, ಪರಂಪರಾಗತವಾದುದು, ಹೆಮ್ಮೆಯದು. ಇಂಗ್ಲಿಷರಲ್ಲಿ ಇಟ್ಟ ಹೆಸರು ಮತ್ತು ಅಡ್ಡ ಹೆಸರುಗಳ ಜೊತೆಗೆ ಕುಲನಾಮವೂ ಸೇರಿದ್ದು 12-13ನೆಯ ಶತಮಾನದಿಂದೀಚೆಗೆ. ಭಾರತದಲ್ಲಿ ಕಾಣುವ ಗುಪ್ತ, ಹೊಯ್ಸಳ, ಕದಂಬ ಮೊದಲಾದ ರಾಜಮನೆತನಗಳಿಗಿದ್ದ ಕುಲನಾಮಗಳು ಈ ಬಗೆಯವು. ಉತ್ತರಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಜನ್ಮನಾಮ, ಪಿತೃನಾಮ, ಕುಲನಾಮಗಳು ಕ್ರಮವಾಗಿ ಸೇರಿರುವ ಹೆಸರುಗಳು ಅವರವು.  ಉದಾ: ಬಸಪ್ಪ-ದಾನಪ್ಪ-ಜತ್ತಿ. ದಕ್ಷಿಣ ಕರ್ನಾಟಕದಲ್ಲಿ ಊರಿನ ಹೆಸರು, ತಂದೆಯ ಹೆಸರು-ಜನ್ಮನಾಮಗಳು ಕ್ರಮವಾಗಿ ಸೇರಿರುತ್ತವೆ. ಉದಾಹರಣೆಗೆ, ತೀರ್ಥಪುರ ನಂಜುಡಯ್ಯ ಶ್ರೀಕಂಠಯ್ಯ, ಕೋಟ ಶಿವ ರಾಮ ಕಾರಂತ ಈ ಹೆಸರುಗಳಲ್ಲಿರುವಂತೆ ಊರಿನ ಹೆಸರು, ಜನ್ಮನಾಮ ಮತ್ತು ಕುಲನಾಮಗಳು ಸೇರಿರುವುದು ದಕ್ಷಿಣ ಕನ್ನಡದ ರೀತಿ. ಎಲ್ಲ ಕಡೆಯಲ್ಲೂ ವ್ಯಕ್ತಿಯನ್ನು ಕರೆಯಲು ಬಳಸುವುದು ಜನ್ಮನಾಮವನ್ನೇ. ಮದುವೆಯಾದ ಹೆಣ್ಣು ಮಕ್ಕಳು ಹೆಸರು ಬದಲಿಸಿಕೊಳ್ಳುವ ಪದ್ಧತಿ ಭಾರತದ ಕೆಲವು ಭಾಗಗಳಲ್ಲಿದೆ. ಪಾಶ್ಚಾತ್ಯರ ನ್ನು ಅನುಸರಿಸಿ ವಿವಾಹಿತ ಸ್ತ್ರೀಯರು ತಮ್ಮ ಹೆಸರಿಗೆ ಗಂಡನ ಹೆಸರು ಸೇರಿಸಿಕೊಳ್ಳುವ ಪದ್ಧತಿ ಭಾರತದಲ್ಲಿಯೂ ಬೆಳೆದಿದೆ. ಎಲ್ಲ ದೇಶಗಳಲ್ಲಿಯೂ ಅವರವರ ಭಾಷೆಯ ಹೆಸರಿಟ್ಟುಕೊಳ್ಳುವುದು ಸಹಜವೇ. ಕೆಲವೊಮ್ಮೆ ಸಾಂಸ್ಕøತಿಕ ಕಾರಣದಿಂದಲೋ ಧಾರ್ಮಿಕ ಕಾರಣದಿಂದಲೋ ಸೊಗಸಿನ ಕಾರಣಕ್ಕಾಗಿಯೋ ಅನ್ಯಭಾಷಾ ಮೂಲದ ಹೆಸರುಗಳನ್ನು ಗುರುತಿಸಬಹುದು. ಕನ್ನಡನಾಡಿನಲ್ಲಿ ಸಂಸ್ಕøತೀಕರಣ, ಉರ್ದು ಮಾತನಾಡುವವರಲ್ಲಿ ಅರಬೀಕರಣ, ಇಂಗ್ಲಿಷರಲ್ಲಿ ಗ್ರೀಕ್ ಅಥವಾ ಲ್ಯಾಟನೀಕರಣ ಇಂಥ ಕಾರಣಗಳಿಂದ ಆಗಿರುತ್ತವೆ. ಆಧುನಿಕ ಯುಗದಲ್ಲಿ ಹೆಸರಿಡುವ ಪ್ರವೃತ್ತಿ ಎಲ್ಲ ಕಡೆಯೂ ಸಹಜವಾಗಿಯೇ ಫ್ಯಾಶನ್ ಪ್ರಧಾನವಾಗಿದೆ ಎಂಬುದನ್ನು ಗುರುತಿಸಬಹುದು. 								
		(ವಿ.ಎಚ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ